ಪ್ರಭಾಸ ಪಟ್ಟಣ - 
	ದಕ್ಷಿಣ ಗುಜರಾತಿನ ಜುನಾಗಢ ಜಿಲ್ಲೆಯಲ್ಲಿ ಕಾಠಿಯಾವಾಡದ ಕರಾವಳಿಯ ಮೇಲೆ ಇರುವ ಒಂದು ಪ್ರಾಚೀನ ಪಟ್ಟಣ. ಇದು ಈ ಪ್ರದೇಶದ ಒಂದು ಪ್ರಸಿದ್ಧ ಯಾತ್ರಾಸ್ಥಳ. ಇದನ್ನು ಸೋಮನಾಥ ಪಟ್ಟಣ ಎಂದೂ ಪಟನ್ ಎಂದೂ ಕರೆಯುತ್ತಾರೆ. ಇದರ ಜನಸಂಖ್ಯೆ 16,749 (1971). ಇಲ್ಲಿ ಒಂದು ಹಳೆಯ ಬಂದರಿದೆ. ಇದರ ಪಕ್ಕದಲ್ಲೇ ಬೆಳೆದಿರುವ ವೇರವಾಲ್ ಬಂದರು ನಗರ ಈ ಪಟ್ಟಣವನ್ನೂ ಸೇರಿಕೊಂಡು ಬೆಳೆಯುತ್ತಿದೆ.

	ಸಮುದ್ರ ದಡದಲ್ಲಿರುವ ಒಂದು ಸುಂದರವಾದ ಪಟ್ಟಣ ಎಂದು ಭಾಗವತಪುರಾಣ ಇದನ್ನು ವರ್ಣಿಸಿದೆ. ಶ್ರೀಕೃಷ್ಣ ಮತ್ತು ಅರ್ಜುನರು ಈ ಸ್ಥಳವನ್ನು ಸಂದರ್ಶಿಸಿದರೆಂದೂ ಹೇಳಲಾಗಿದೆ. ಕುಮಾರ ಪುರಾಣ, ಪದ್ಮಪುರಾಣ, ಯೋಗಿನೀ ತಂತ್ರ ಮೊದಲಾದ ಗ್ರಂಥಗಳಲ್ಲಿ ಈ ಪಟ್ಟಣದ ಉಲ್ಲೇಖವಿದೆ. ಮಥುರಾ ಪಟ್ಟಣದ ಬೌದ್ಧ ವಿಗ್ರಹದ ಮೇಲಿರುವ ಹುವಿಷ್ಕನ ಶಾಸನದಲ್ಲೂ ನಾಸಿಕದ ಗುಹೆಗಳಲ್ಲಿರುವ ನಹಪಾಣನ ಕಾಲದ ಶಾಸನದಲ್ಲೂ ಈ ಪಟ್ಟಣದ ಹೆಸರಿದೆ. ಇದನ್ನು ಪ್ರಭಾಸ ತೀರ್ಥ ಎಂಬುದಾಗಿಯೂ ಕರೆಯಲಾಗಿದೆ. ದ್ವಾರಕೆಗೆ ಹೋದ ಯಾತ್ರಾರ್ಥಿಗಳು ಇದನ್ನು ಸಂದರ್ಶಿಸದೆ ಹಿಂದಿರುಗಿದಲ್ಲಿ ಅವರ ಯಾತ್ರೆ ಪೂರ್ಣವಾಗುವುದಿಲ್ಲವೆಂದು ನಂಬಿಕೆಯಿದೆ. ಇಲ್ಲಿಯ ಸೋಮೇಶ್ವರ ದೇವಾಲಯದ ಉಲ್ಲೇಖ ಪದ್ಮಪುರಾಣದಲ್ಲಿ ಬರುತ್ತದೆ. ಈ ದೇವಾಲಯ ತುಂಬ ಪ್ರಸಿದ್ಧವಾದ್ದು. ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇಲ್ಲಿಯದೂ ಒಂದು. ಈ ದೇವಾಲಯವನ್ನು ನಾಶಪಡಿಸಿದಷ್ಟು ಸಲ ಬೇರಾವ ದೇವಾಲಯವನ್ನೂ ನಾಶಪಡಿಸಿಲ್ಲ. ಆದರೆ ಶತ್ರು ದೇವಾಲಯಕ್ಕೆ ಬೆನ್ನು ತೋರುತ್ತಿದ್ದಂತೆಯೇ ಈ ಮಂದಿರದ ಪೂಜೆಗಳು ಮತ್ತೆ ಪ್ರಾರಂಭವಾಗುತ್ತಿದ್ದುವು. ಇದನ್ನು ಹಲವು ಸಾರಿ ಪುನರ್ನಿರ್ಮಿಸಲಾಗಿದೆ. 1951ರಲ್ಲಿ ಇದನ್ನು ಮತ್ತೆ ನಿರ್ಮಿಸಲಾಯಿತು. ಮಹಮ್ಮದ್ ಘಜ್ನಿ ಈ ದೇವಾಲಯವನ್ನು ಸಂಪೂರ್ಣವಾಗಿ ಹಾಳು ಮಾಡಬೇಕೆಂದು ಹದಿನೇಳು ಬಾರಿ ದಂಡೆತ್ತಿ ಬಂದಿದ್ದ.

	ಈ ಊರಿನ ಪೂರ್ವಕ್ಕೆ ದೇವಾಲಯಗಳೂ ಪಶ್ಚಿಮಕ್ಕೆ ಮಸೀದಿಗಳೂ ಇವೆ. ಇಲ್ಲಿಯ ಕೆಲವು ಬೌದ್ಧ ಗುಹಾಂತರ್ದೇವಾಲಯಗಳನ್ನು ಬಿಟ್ಟರೆ ಸಮುದ್ರ ತಟದಲ್ಲಿರುವ ದೇವಾಲಯಗಳು ಬಹಳ ಪುರಾತನವಾದವು. ಇವುಗಳ ಆಕೃತಿ. ರಚನಾ ಚಾತುರ್ಯ ಮತ್ತು ಶೈಲಿಯನ್ನು ಕಾಶ್ಮೀರ ದೇವಾಲಯಗಳಿಗೆ (ಮುಖ್ಯವಾಗಿ ಮಾರ್ತಾಂಡ ದೇವಾಲಯ, 8ನೆಯ ಶತಮಾನ) ಹೋಲಿಸಬಹುದು. ಸೋಮನಾಥ ದೇವಾಲಯ ಜಾಮಿ ಮಸೀದಿ (ಊರಿನ ಹೊರಗೆ ಇದ್ದ ಸೂರ್ಯದೇವಾಲಯದ ಅವಶೇಷಗಳಿಂದ ನಿರ್ಮಿಸಲಾಗಿದ್ದು) ಹಳೆಯ ಪಾಶ್ರ್ವನಾಥ ದೇವಾಲಯ, ಕೋರ ಎಂಬ ಹಳೆಯ ಬಾರೂದಿನ ಕೋಠಿ ಮತ್ತು ಹಳೆಯ ಪಟ್ಟಣದ ಗೋಡೆಗಳಲ್ಲಿ ಸದ್ಯಕ್ಕೆ ಉಳಿದಿರುವ ಪೂರ್ವ ಮತ್ತು ಪಶ್ಚಿಮದ ದ್ವಾರಗಳು ಇಲ್ಲಿಯ ಪುರಾತನ ಕಟ್ಟಡಗಳನ್ನು ಪ್ರತಿನಿಧಿಸುತ್ತವೆ. ಈ ದ್ವಾರಗಳ ಕಂಬಗಳ ಮೇಲಿನ ಬೋದಿಗೆಗಳಲ್ಲಿ ಅತ್ಯಂತ ಸುಂದರವಾದ ಮತ್ತು ನಯವಾದ ಕೆತ್ತನೆಯ ಕೆಲಸವಿದೆ.

	ಸಮುದ್ರದಲ್ಲಿ ನಿಂತಿರುವ ಸೋಮನಾಥ ದೇವಾಲಯವನ್ನು ಸಮುದ್ರದ ಅಲೆಗಳಿಂದ ಕಾಪಾಡಲು ಮಂದಿರದ ಹಿಂಭಾಗದಲ್ಲಿ ಒಂದು ದೊಡ್ಡ ಗೋಡೆಯನ್ನು ನಿರ್ಮಿಸಲಾಗಿದೆ. ಇದು ಬಹಳ ದೊಡ್ಡದಾಗಿ ಕಟ್ಟಲ್ಪಟ್ಟಿತ್ತೆಂಬುದನ್ನು ಇಲ್ಲಿಯ ಅವಶೇಷಗಳಿಂದ ಊಹಿಸಬಹುದು. ಅಲ್ಲದೆ ಹಳೆಯ ದೇವಾಲಯದ ಕೆಲವು ಭಗ್ನಾವಶೇಷಗಳು ಈಗಲೂ ಅಲ್ಲಲ್ಲಿ ಕಾಣಬರುತ್ತವೆ. ಹಳೆಯ ದೇವಾಲಯ ಮೇಲೆಯೇ ಹೊಸದರ ನಿರ್ಮಾಣವಾಗಿದೆ. ಈಗಿರುವ ದೇವಾಲಯವನ್ನು ಗುಜರಾತಿನ ದೊರೆಯಾದ ಕುಮಾರಪಾಲನೂ (1143-1172) ಒಳಗೆ ಕಾಣಬರುವ ಹಳೆಯ ಮಂದಿರವನ್ನು 1ನೆಯ ಭೀಮದೇವನೂ (1022-1077) ಕಟ್ಟಿಸಿರಬಹುದೆಂದು ಹೇಳುತ್ತಾರೆ.

	ಈ ಮಂದಿರ ಸಂಪೂರ್ಣವಾಗಿದ್ದಾಗ ಮುಂಭಾಗದಲ್ಲಿ ಒಂದು ಗೂಢಮಂಟಪವೂ ಇದರ ಪಶ್ಚಿಮಕ್ಕೆ ಗರ್ಭಗೃಹವೂ ಇದ್ದುವು. ಗರ್ಭಗೃಹದ ಸುತ್ತಲೂ ಪ್ರದಕ್ಷಿಣ ಪಥವಲ್ಲದೆ ಮಂದಿರದಲ್ಲಿ ಒಂದು ಸಭಾಮಂಟಪವೂ ಇದ್ದಿರಬಹುದೆಂದು ಊಹಿಸಬಹುದು. ಹೊರಾಂಗಣದ ಚಾವಣಿಯನ್ನು ಒಂದು ಗುಮ್ಮಟದಿಂದ ಮುಚ್ಚಲಾಗಿದೆ. ಇದಕ್ಕೆ ಸೇರಿದಂತೆ ಎರಡು ಮಿನಾರಗಳಿವೆ. ಇದನ್ನು ಮಸೀದಿಯಂತೆ ಪರಿವರ್ತಿಸಲಾಗಿದೆ. ದ್ವಾರಭಾಗವನ್ನೂ ಹೊಸದಾಗಿ ಸರಿಪಡಿಸಲಾಗಿದೆ. ಮಂದಿರದ ಹೊರಗಡೆ ನಂದಿಯ ಕೆಲವು ಚೂರುಗಳು ಬಿದ್ದಿವೆ. ಇದರಿಂದ ಇಲ್ಲಿ ನಂದಿಮಂಟಪವಿದ್ದಿರಬಹುದೆಂದು ಊಹಿಸಬಹುದು. ದೇವಾಲಯದ ಹೊರಭಿತ್ತಿಯಲ್ಲಿರುವ ವಿಗ್ರಹಗಳನ್ನು ಗುರುತಿಸುವುದು ಸುಲಭ ಸಾಧ್ಯವಲ್ಲ. ಆದರೆ ಇಲ್ಲಿ ಕೆಲವು ದೇವತೆಗಳ, ಶಿವಪಾರ್ವತಿಯರ ಮತ್ತು ನಟರಾಜನ ವಿಗ್ರಹಗಳನ್ನು ಕಂಡುಹಿಡಿಯಬಹುದು. ಇವಲ್ಲದೆ ಅಷ್ಟದಿಕ್ಪಾಲಕರ ಮತ್ತು ರಾಮಾಯಣದ ಕೆಲವು ವಿಗ್ರಹಗಳೂ ಕಾಣಬರುತ್ತವೆ. ದೇವಾಲಯದ ಹೊರವಲಯದಲ್ಲಿ ಭಿನ್ನವಾಗಿರುವ ಎರಡು ಸೂರ್ಯ ವಿಗ್ರಹಗಳೂ ಒಂದು ಭೈರವ ವಿಗ್ರಹವೂ ಇವೆ. ಈ ದೇವಾಲಯದಲ್ಲಿ ಹಲವು ಸ್ತಂಭಗಳನ್ನು ನಿಲ್ಲಿಸಿ ಮುಸ್ಲಿಮರು ಇದರ ಒಳ ಆವರಣವನ್ನು ಮಸೀದಿಯಂತೆ ಉಪಯೋಗಿಸುತ್ತಿದ್ದರು. ಈ ದೇವಾಲಯದಲ್ಲಿ ಮುತ್ತು ರತ್ನಗಳಿಂದ ಅಲಂಕೃತವಾದ ಐವತ್ತಾರು ಕಂಬಗಳಿದ್ದವೆಂದೂ ಅವುಗಳ ಮೇಲೆ ದಾನಿಗಳ ಹೆಸರು ಕೆತ್ತಲ್ಪಟ್ಟಿತ್ತೆಂದೂ ಹೇಳುತ್ತಾರೆ.

	ಈ ಮಂದಿರದ ಚರಿತ್ರೆಯನ್ನು ವಿಶದವಾಗಿ ಹೇಳಲು ಸಾಧ್ಯವಿಲ್ಲ. ಈ ದೇವಾಲಯವನ್ನು ಮೊದಲು ಚಂದ್ರ ಬಂಗಾರದಲ್ಲೂ ಅನಂತರ ಕೃಷ್ಣ ಬೆಳ್ಳಿಯಲ್ಲೂ ಆಮೇಲೆ ಭೀಮದೇವ ಕಲ್ಲಿನಿಂದಲೂ ನಿರ್ಮಿಸಿದನೆಂದು ಹೇಳುತ್ತಾರೆ. ದ್ವಾರಕೆಗೆ ಯಾದವರ ಕಾಲದಿಂದಲೂ ಯಾತ್ರಾರ್ಥಿಗಳು ಬರುತ್ತಿದ್ದರೆಂದು ಉಲ್ಲೇಖಗಳಿವೆ. ಆದರೆ ಮಹಾಭಾರತದಲ್ಲಿ ಇದನ್ನು ಹೇಳುವುದಿಲ್ಲ. ಒಟ್ಟಿನಲ್ಲಿ ವಲಭಿ (480-767) ದೊರೆಗಳಿಗಿಂತ ಮುಂಚೆಯೇ ಈ ದೇವಾಲಯದ ನಿರ್ಮಾಣವಾಗಿತ್ತೆಂದು ತಿಳಿದುಬರುತ್ತದೆ. ಅನ್ಹಿಲ್‍ವಾಡದ ಮೂಲ ರಾಜ (942-997) ಈ ದೇವಾಲಯವನ್ನು ಸಂದರ್ಶಿಸಿದನೆಂಬುದಕ್ಕೆ ಶಾಸನಗಳಲ್ಲಿ ಉಲ್ಲೇಖಗಳಿವೆ. ಸೋಮನಾಥ ಎಲ್ಲ ದೇವರುಗಳ ಹಿಂದೂಗಳ ನಂಬಿಕೆ. 1025ರಲ್ಲಿ ಮಹಮ್ಮದ್ ಘಜ್ನಿó ಇದನ್ನು ಸಂಪೂರ್ಣವಾಗಿ ಹಾಳುಮಾಡಿದ.

	ಕ್ರಿ. ಪೂ. ಸುಮಾರು 2500ರಲ್ಲಿ ಪ್ರಭಾಸದಲ್ಲಿ ತಾಮ್ರಯುಗಕ್ಕೆ ಸಂಬಂಧಿಸಿದ ಜನವಸತಿ ಇದ್ದಿರಬಹುದೆಂದು ಊಹಿಸಲಾಗಿದೆ. ಈ ಕಾಲಕ್ಕೆ ಸಂಬಂಧಿಸಿದ, ತಿರುಗು ಗಾಲಿಯ ಮೇಲೆ ಮಾಡಲಾದ, ಒರಟಾದ, ಕಂದು ಬಣ್ಣದ ಮಣ್ಣಿನ ಪಾತ್ರೆಗಳು ಮತ್ತು ಬೇರೆ ಅವಶೇಷಗಳು ದೊರಕಿವೆ. ಈ ಪಾತ್ರೆಗಳು ದಕ್ಷಿಣ ಭಾರತದ ಶಿಲಾಯುಗ ಸಂಸ್ಕøತಿಯ ಪಾತ್ರೆಗಳನ್ನು ಹೋಲುತ್ತವೆ. ಆಮೇಲೆ ಹರಪ್ಪನರ ಕೊನೆಯ ಕಾಲಕ್ಕೆ ಸಂಬಂಧಿಸಿದ ಅವಶೇಷಗಳೂ ದೊರಕಿವೆ. ಸೋಮನಾಥ ಅಥವಾ ಪ್ರಭಾಸ ಪಟ್ಟಣವೇ ಮಹಾಭಾರತದಲ್ಲಿ ಹಳೆಯ ಕಾಲದ ವಾಸಸ್ಥಾನಗಳಲ್ಲಿ ಒಂದಾದ ನಗರ ಎಂದು ಹೇಳಿರುವ ಸ್ಥಳ ಇರಬಹುದು. ವೇರವಲ್ ಸಮೀಪದಲ್ಲಿ, ಹಿರಣ್ಯ ನದಿ ಸಮುದ್ರವನ್ನು ಸೇರುವ ಜಾಗದಲ್ಲಿ ಪ್ರಾಚೀನ ಅವಶೇಷಗಳ ಗುಡ್ಡಗಳಿವೆ. ಈ ಗುಡ್ಡಗಳಲ್ಲಿ ಉತ್ಖನನಗಳನ್ನು ನಡೆಸಿದ ಮೇಲೆ ಇಲ್ಲಿಯ ಅವಶೇಷಗಳ ಮೂಲಕ ಇಲ್ಲಿ ಐದು ಅವಧಿಗಳನ್ನು ಗುರುತಿಸಲಾಗಿದೆ. ಒಂದನೆಯ ಅವಧಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ ಕಂದು ಬಣ್ಣದ ಮಣ್ಣಿನ ಪಾತ್ರೆಗಳೂ ಶಿಲೆಯ ಆಯುಧಗಳೂ ಮುಖ್ಯವಾಗಿ ಬಾಕುಗಳೂ ಅಲಗುಗಳೂ ದೊರಕಿವೆ. ಇವಕ್ಕೂ ಎರಡನೆಯ ಭಾಗದ ಅವಶೇಷಗಳಿಗೂ ಯಾವ ರೀತಿಯಾದ ಸಂಬಂಧವೂ ಇಲ್ಲ. ಹರಪ್ಪನರು ಇಲ್ಲಿಗೆ ಬರುವುದಕ್ಕೆ ಮುಂಚೆ ಲೋಹದ ಉಪಯೋಗವನ್ನು ತಿಳಿಯದ ಒಂದು ಗುಂಪಿನ ಜನರು ಇಲ್ಲಿ ವಾಸಿಸುತ್ತಿದ್ದರೆಂದು ಹೇಳಲಾಗಿದೆ. ಈ ಜನರು ಸೌರಾಷ್ಟ್ರದಲ್ಲಿ ಅಭ್ರಕದಿಂದ ಕೂಡಿದ ಕೆಂಪು ಬಣ್ಣದ ಮಡಕೆಗಳನ್ನು ಉಪಯೋಗಿಸುತ್ತಿದ್ದ ರೋಜ್ಡಿ ಮತ್ತು ಲೋಥಾಲ್ ಜನರಿಂದ ಭಿನ್ನವಾಗಿದ್ದವರಾಗಿದ್ದರು. ಕತ್ತರಿಯ ಆಕಾರದ ಮತ್ತು ವೃತ್ತಗಳ ಮಧ್ಯೆ ಚುಕ್ಕೆಗಳಿಂದ ಅಲಂಕೃತವಾದ ಮಡಕೆಗಳು ಈ ಕಾಲಕ್ಕೆ ಸಂಬಂಧಿಸಿದವು.

	ಒಂದನೆಯ ಅವಧಿಯ ಎರಡನೆಯ ಭಾಗಕ್ಕೆ ಸಂಬಂಧಿಸಿದಂತೆ ಬಣ್ಣ ಹಾಕಿದ ಮಡಕೆಗಳು ಹೇರಳವಾಗಿ ದೊರಕುತ್ತವೆ. ಇವುಗಳಲ್ಲಿ ಗೋಲಾಕಾರದ ಬಟ್ಟಲುಗಳು ಆಧಾರದ ಮೇಲೆ ನಿಂತಿರುವ ತಟ್ಟೆಗಳು, ಹಿಡಿಯುವ ಬಾಣಲೆಗಳು ಸೇರಿವೆ. ಇವುಗಳ ಮೇಲೆ ಸರಳರೇಖೆಗಳೂ ಚುಕ್ಕೆಗಳೂ ಆದಿ ತಾಮ್ರಯುಗಕ್ಕೆ ಸಂಬಂಧಿಸಿದ ಚಿಹ್ನೆಗಳೂ ಇವೆ. ತಾಮ್ರಯುಗದ ಚಿಹ್ನೆಗಳೂ ಹರಪ್ಪದ ಚಿಹ್ನೆಗಳೂ ಒಂದರ ಮೇಲೊಂದು ಇರುವಂತೆ ತಿಳಿದುಬರುತ್ತದೆ. ಇಲ್ಲಿ ದೊರಕುವ ಅವಶೇಷಗಳಿಂದ ಹರಪ್ಪ ನಗರ ಹಾಳಾದ ಮೇಲೆ ಅಲ್ಲಿ ವಾಸಿಸುತ್ತಿದ್ದ ಜನರು ನಿರಾಶ್ರಿತರಾಗಿ ಇಲ್ಲಿಗೆ ಬಂದು ನೆಲಸಿರಬಹುದೆಂದು ಹೇಳಬಹುದು.

	ಎರಡನೆಯದ ಅವಧಿಯನ್ನೂ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇಲ್ಲಿಗೆ ಬಂದ ಹರಪ್ಪನರು ಹೊಸ ಹೊಸ ರೀತಿಯ ಮಡಕೆಗಳನ್ನು ತಯಾರು ಮಾಡಲು ಪ್ರಾರಂಭಿಸಿ ಕೊನೆಗೆ ಹೊಳೆಯುವ ಕೆಂಪು ಬಣ್ಣದ ಮಡಕೆಗಳನ್ನು ತಯಾರಿಸಲಾರಂಭಿಸಿದರು. ಇವನ್ನು ರಂಗಪುರದ ಮೂರನೆಯ ಕಾಲದವಕ್ಕೆ ಹೋಲಿಸಬಹುದು. ಈ ಕಾಲಕ್ಕೆ ಸಂಬಂಧಿಸಿದ ಹೊಳಪಿನ ಕೆಂಪು ಬಣ್ಣದ ಮಣ್ಣಿನ ಹಿಡಿಯಿರುವ ಬಾಣಲೆ, ಆಧಾರವಿರುವ ತಟ್ಟೆ ಇವು ದೊರಕುತ್ತವೆ. ಇವುಗಳ ಮೇಲಿನ ಚಿತ್ರಕಲೆಯನ್ನು ಹರಪ್ಪನರ ಚಿತ್ರಕಲೆಯಿಂದ ಅಳವಡಿಸಿಕೊಳ್ಳಲಾಗಿದೆ. ವಂಕಿಗಳೂ ಚಿಕ್ಕ ರೇಖೆಗಳಿಂದ ತುಂಬಿದ ಚದುರಗಳೂ, ಸರಳರೇಖೆಗಳಿಂದ ಕೂಡಿರುವ ವೃತ್ತಗಳೂ ಜಿಂಕೆಯ ಚಿತ್ರಗಳೂ ಇವೆ. ಈ ಕಾಲದ ಮಡಕೆಗಳು ಸ್ವಲ್ಪ ಭಾರವಾಗಿವೆ. ಈ ಅವಧಿಯ ಎರಡನೆಯ ಭಾಗದಲ್ಲಿ ಹೊಳಪಿನ ಕೆಂಪುಬಣ್ಣದ ಮಡಕೆಗಳು ಕಡಿಮೆಯಾಗುತ್ತವೆ. ಬಣ್ಣಗಳಿಂದ ಕೂಡಿದ ಅಲಂಕೃತ ಮಡಕೆಗಳು ಹೆಚ್ಚಾಗಿ ದೊರಕುತ್ತವೆ. ಗ್ರಾಫಿಟ್ ಬರವಣಿಗೆಯೂ ಹೆಚ್ಚಾಗಿದೆ. ಮಧ್ಯಶಿಲಾಯುಗದ ಕಾಲದ ಕಲ್ಲಿನ ಆಯುಧಗಳು ದೊರಕುತ್ತವೆ.

	ಮೂರನೆಯ ಅವಧಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಕಪ್ಪು ಮತ್ತು ಕೆಂಪು ಬಣ್ಣದ ಪಾತ್ರೆಗಳ ಬಳಕೆ ಮತ್ತು ಕಬ್ಬಿಣದ ಉಪಯೋಗ ಈ ಅವಧಿಯಲ್ಲಿ ಕಂಡುಬರುತ್ತದೆ. ಮಣ್ಣಿನ ಗೋಲಾಕಾರದ ಬಟ್ಟಲುಗಳು ಮತ್ತು ತಟ್ಟೆಗಳು ಹೇರಳವಾಗಿವೆ. ಒರಟಾಗಿ ಮಾಡಿದ ಈ ಮಡಕೆಗಳ ಮೇಲೆ ಹಳದಿ, ಕೆಂಪು ಮಿಶ್ರಿತ ಬಿಳುಪು ಮತ್ತು ಕಂದುಬಣ್ಣದ ಲೇಪವನ್ನು ಕೊಡಲಾಗಿದೆ. ಉತ್ತರ ಭಾರತದಲ್ಲಿ ದೊರಕಿರುವ ಹೊಳಪುಕೊಟ್ಟ ಕಪ್ಪು ಬಣ್ಣದ ಮಡಕೆಗಳು ಈ ಅವಧಿಯಲ್ಲಿ ಆರಂಭವಾಗುತ್ತವೆ. ಈ ಅವಧಿಯ ಮೂರನೆಯ ಭಾಗದಲ್ಲಿ ದಂತದ ಪಿನ್ನುಗಳು, ಹೆಣ್ಣುವಿಗ್ರಹಗಳಿಂದ ಕೂಡಿದ ತಟ್ಟೆಗಳು, ಮಣಿಗಳು, ಬೆಲೆಬಾಳುವ ಕಲ್ಲಿನಿಂದ ಮಾಡಿದ ಕಿವಿಯ ಆಭರಣಗಳು (ನುಣುಪಾದ ಕಲ್ಲಿನ ಗಾಲಿಯಾಕಾರದ ಕರ್ಣಾಭರಣದ ಮೇಲೆ ಬಂಗಾರದ ಹಾಳೆ ಹೊದಿಸಿದೆ) ಸಿಕ್ಕಿವೆ. ಮೈ ಉಜ್ಜುವ ಮಣ್ಣಿನ ಸಾಧನದ ಮೇಲೆ ಕ್ರಿ.ಪೂ. 2ನೆಯ ಶತಮಾನದ ಬರವಣಿಗೆ ಇದೆ.

	ನಾಲ್ಕನೆಯ ಅವಧಿಯಲ್ಲಿ ಕೆಂಪು ಮತ್ತು ಕಪ್ಪು ಬಣ್ಣದ ಮಡಕೆಗಳು ಸಂಪೂರ್ಣವಾಗಿ ಸಿಗುವುದಿಲ್ಲ. ದಂತ ಎಲುಬಿನ ಲೇಖನಿಗಳು, ಕಬ್ಬಿಣದ ಭಲ್ಲೆಗಳು ಮತ್ತು ಚೂಪಾದ ಬಾಣದ ಮೊನೆಗಳು, ಮಣ್ಣಿನ ಆಟದ ಸಾಮಾನುಗಳು, ಒಂದು ಬಂಗಾರದ ಮಣಿ ಮತ್ತು ಅನೇಕ ಬಗೆಯ ಮಣಿಗಳು ದೊರಕಿವೆ.

	ಐದನೆಯ ಅವಧಿಯಲ್ಲಿ ಕೆಂಪು ಬಣ್ಣದ ಮಡಕೆಗಳು ಹೆಚ್ಚಾಗಿವೆ. ಮಾನವ ಮತ್ತು ಪ್ರಾಣಿಗಳ ಮಣ್ಣಿನ ಬೊಂಬೆಗಳೂ ಶಂಕದಿಂದ ಕೂಡಿದ ಬಳೆಗಳೂ ಅಡಕೆಯ ಆಕಾರದ ಮಣಿಗಳೂ, ಕ್ಷತ್ರಪ ಮತ್ತು ಗುಪ್ತರ ಕಾಲದ ನಾಣ್ಯಗಳೂ ದೊರಕಿವೆ.
(ಸಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ